ಸಾಫೋಕ್ಲೀಸ್
	ಕ್ರಿ. ಪೂ. 496-406. ಪ್ರಪಂಚಪ್ರಸಿದ್ಧ ಗ್ರೀಕ್ ರುದ್ರನಾಟಕಕಾರ. ಗ್ರೀಕ್ ನಾಟಕ ಚರಿತ್ರೆಯ ರತ್ನತ್ರಯರಲ್ಲಿ ಒಬ್ಬ. ಉಳಿದವರು ಈಸ್ಕಿಲಸ್ ಹಾಗೂ ಯೂರಿಪಿಡೀಸ್. ಅಥೆನ್ಸ್ ಪಟ್ಟಣದ ಒಂದು ಚಿಕ್ಕ ಗ್ರಾಮ ಕಲೋನಸ್ ಎಂಬಲ್ಲಿ ಕ್ರಿ. ಪೂ. 496 ರಲ್ಲಿ ಜನಿಸಿದ. ಶಾಂತ ಸ್ವಭಾವದ ಸ್ಫುರದ್ರೂಪಿ. ಇವನ ತಂದೆ ಸೊಫೀಲಸ್, ಆರ್ಥಿಕವಾಗಿ ಹೆಚ್ಚು ಶ್ರೀಮಂತವೂ ಸುಸಂಸ್ಕøತವೂ ಆಗಿದ್ದ ಕೌಟುಂಬಿಕ ಹಿನ್ನೆಲೆ ಇವನದು. ತಂದೆಯಿಂದಲೇ ಸಂಗೀತ, ನೃತ್ಯ, ವ್ಯಾಯಾಮಗಳನ್ನು ಕಲಿತು ಪರಿಣತಿ ಸಾಧಿಸಿದ. ಇವನು 16 ವರ್ಷದವನಿದ್ದಾಗ ಅಥೆನ್ಸ್‍ನಗರ ಸಲಾಮಿಸ್ ಕದನದ ವಿಜಯೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ಲೈರ್ ವಾದ್ಯವನ್ನು ನುಡಿಸುತ್ತಾ ಮೇಳದ ನಾಯಕನಾಗಿ ತನ್ನ ಗಾನಪ್ರತಿಭೆಯನ್ನು ಸಾರ್ವ ಜನಿಕವಾಗಿ ಪ್ರದರ್ಶಿಸಿ ಪ್ರಸಿದ್ಧನಾಗತೊಡಗಿದ. 27ನೆಯ ವರ್ಷದಿಂದ ಸು. 30 ವರ್ಷಗಳವರೆಗೆ ಸತತ ವಾಗಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಯಸ್ಸಿನಿಂದಲೂ ನಾಟಕ ರಚನೆಯಿಂದಲೂ ಹಿರಿಯವನಾಗಿದ್ದ ಈಸ್ಕಿಲಸ್ ನನ್ನೇ ಹಲವು ಬಾರಿ ಸೋಲಿ ಸಿದ್ದ. 24 ಬಾರಿ ಮೊದಲ ಬಹುಮಾನ ಪಡೆದ ಹೆಗ್ಗಳಿಕೆ ಇವನದು. ತಾರುಣ್ಯದಿಂದ ವೃದ್ಧಾಪ್ಯದವರೆಗೂ ನಾಟಕ ರಚನೆ, ಪ್ರದರ್ಶನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ. 

	ಇವನು 123 ನಾಟಕಗಳನ್ನು ರಚಿಸಿದ್ದರೂ ಏಜಾಕ್ಸ್, ಅಂತಿಗೊನೆ, ಈಡಿಪಸ್ ಟಿರೇನಸ್, ದ ಟ್ರಾಕಿನಿಯೆ, ಎಲೆಕ್ಟ್ರ, ಫಿಲೋಕ್ಟೆಟಸ್, ಈಡಿಪಸ್ ಅಟ್‍ಕಲೋನಸ್ ಎಂಬ 7 ನಾಟಕಗಳು ಮಾತ್ರ ಲಭ್ಯವಾಗಿವೆ. ಇವುಗಳ ರಚನೆಯ ಕಾಲವೂ ತಿಳಿದುಬಂದಿಲ್ಲ. ಆರಂಭದ ಇಪ್ಪತ್ತು ವರ್ಷಗಳಲ್ಲಿ ರಚಿಸಿದ ಯಾವ ನಾಟಕಗಳೂ ಲಭ್ಯವಾಗಿಲ್ಲ. 

	ಈಸ್ಕಿಲಸ್‍ನ ನಾಟಕಗಳಿಗಿಂತ ಈತನ ನಾಟಕಗಳು ಹೆಚ್ಚು ದೀರ್ಘವಾದವು. ಕ್ರಿಯೆಯೂ ಹೆಚ್ಚು. ಭಾವಗೀತೆಯ ಅಂಶಕ್ಕೆ ಪ್ರಾಧಾನ್ಯ ಕಡಿಮೆ. ಕ್ರಿಯೆ-ಪಾತ್ರಗಳ ನಿಕಟ ಸಂಬಂಧ, ಸನ್ನಿವೇಶ-ಪಾತ್ರಗಳ ಪರಸ್ಪರ ಪ್ರತಿಕ್ರಿಯೆಯಿಂದ ಕ್ರಿಯೆಯ ಮುಂದುವರಿಕೆ, ವ್ಯಕ್ತಿತ್ವ-ವ್ಯಕ್ತಿತ್ವಗಳ ಪ್ರಬಲ ಘರ್ಷಣೆ ಇವು ಇವನ ನಾಟಕಗಳ ಪ್ರಧಾನ ಲಕ್ಷಣಗಳು.

	ಇವನಿಗೆ ಮನುಷ್ಯ ಸ್ವಭಾವದಲ್ಲಿ ಹೆಚ್ಚಿನ ಆಸಕ್ತಿ. ಬದುಕಿನಲ್ಲಿ, ಸಾವಿನಲ್ಲಿ ನಾಟಕದ ನಾಯಕನಿಗೆ ಒದಗಿದ ಭಾಗ್ಯ-ದುರದೃಷ್ಟಗಳನ್ನು ಏಜಾಕ್ಸ್ ನಾಟಕ ವಸ್ತುವಾಗಿ ಹೊಂದಿದೆ. ಬಾಳಿನ ಜಟಿಲತೆ, ಮಾನವ ಸ್ವಭಾವದ ಜಟಿಲತೆಗಳನ್ನು ಶಕ್ತವಾಗಿ ನಿರೂಪಿಸುವ ನಾಟಕ ಅಂತಿಗೊನೆ. ತನಗೆ ಅರಿವಿಲ್ಲದೆ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯುವ ಈಡಿಪಸ್‍ನನ್ನು ನಾಯಕನನ್ನಾಗಿ ಹೊಂದಿರುವುದು ಈಡಿಪಸ್ ಟಿರೇನಸ್ ನಾಟಕ. ಇದು ಪ್ರಪಂಚದ ಅತಿ ಶ್ರೇಷ್ಠ ನಾಟಕಗಳ ಪಂಕ್ತಿಗೆ ಸೇರಿದೆ. ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಈಡಿಪಸ್ ಕಾಂಪ್ಲೆಕ್ಸ್ ಎಂಬ ಹೆಸರನ್ನು ಸೃಷ್ಟಿಸಿದ್ದು ಈ ಕಥೆಯ ಆಧಾರದಿಂದಲೇ ಎಂಬುದು ಗಮನಾರ್ಹ. 

	ರಂಗಸ್ಥಳಕ್ಕೆ ಮೂರನೆಯ ಪಾತ್ರವನ್ನು ತಂದದ್ದು; ಕಥಾವಸ್ತುವಿನ ವಿಶಿಷ್ಟ ಬೆಳೆವಣಿಗೆ, ಅಂದರೆ ಒಂದು ಎಪಿಸೋಡ್‍ನ ಅನಂತರ ಮತ್ತೊಂದು ಎಪಿಸೋಡ್, ಅದರಿಂದ ಮುಂದಿನದು. ಹೀಗೆ ಕ್ರಿಯೆಯ ಹಲವು ಭಾಗಗಳಲ್ಲಿ ಕಾಣುವ ನಿಕಟ ಸಂಬಂಧ; ಒಂದು ಉಗ್ರ ಪರೀಕ್ಷೆಯಗಳಿಗೆ ಮತ್ತು ಅದು ತರುವ ಸಾವು ; ಸಾವು ದೈಹಿಕವಾಗಿ ಯಾಗಲಿ, ಸಾಂಕೇತಿಕವಾಗಿಯಾಗಲಿ ಸತ್ಯದ ಅರಿವನ್ನು ಮೂಡಿಸುತ್ತದೆ; ಮನುಷ್ಯನ ಜ್ಞಾನ ಮಿತವಾದದ್ದು, ಮನುಷ್ಯ ಕಾಲದ ಮಿತಿಗೆ ಹಾಗೂ ಪ್ರಭುತ್ವಕ್ಕೆ ಒಳಗಾದವನು, ಸಾವು-ನೋವುಗಳ ಮೂಲಕ ಮನುಷ್ಯ ಹೊಸ ತಿಳಿವನ್ನು ಪಡೆಯುತ್ತಾನೆ ಎಂದು ಮೊದಲಾಗಿ ನಾಟಕಗಳಲ್ಲಿ ಮೂಡಿಸಿರುವ ತತ್ತ್ವಗಳು; ನಾಟಕಗಳಲ್ಲಿ ತರುವ ಐರನಿ, ಪಾತ್ರಗಳಿಗೆ ಹೊಂದಿಕೊಳ್ಳುವಂತಹ ಸರಳ ಭಾಷೆ, ತೀವ್ರವಾದ ಹಾಗೂ ತೀಕ್ಷ್ಣ ವೇಗದ ಸಂಭಾಷಣೆ ಇವುಗಳೆಲ್ಲವೂ ಇವನ ನಾಟಕಗಳ ವೈಶಿಷ್ಟ್ಯಗ ಳಾಗಿವೆ. ಇವನು ನಾಟಕಗಳಲ್ಲಿ ತರುವ ಐರನಿ ನಾಟಕ ಸಾಹಿತ್ಯದಲ್ಲಿ ಸಾಫೋಕ್ಲಿಯನ್ ಐರನಿ ಎಂದೇ ಪ್ರಸಿದ್ಧವಾಗಿದೆ. ಈತ ಕ್ರಿ.ಪೂ. 406 ರಲ್ಲಿ ನಿಧನನಾದ.
			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	(ಜಿ.ಎನ್.ಎಸ್.)